ಖೇರೀ	-
ಉತ್ತರ ಪ್ರದೇಶದ ಲಖನೌ ವಿಭಾಗದ ಒಂದು ಜಿಲ್ಲೆ; ಒಂದು ಪಟ್ಟಣ. ಉ.ಅ. 27ಲಿ 41`- 28ಲಿ 42` ಮತ್ತು ಪೂ.ರೇ.80ಲಿ 42`- 80ಲಿ-2` ಮಧ್ಯದಲ್ಲಿದೆ. ಜಿಲ್ಲೆಯ ವಿಸ್ತೀರ್ಣ 2,972 ಚ.ಮೈ. ಭಾರತ-ನೇಪಾಳ ಗಡಿಗೆ ಹೊಂದಿಕೊಂಡಂತೆ ಇದೆ. ಇದರ ಉತ್ತರದ ಗಡಿಯಲ್ಲಿ ಹರಿಯುವ ನದಿ ಮೋಹನ್. ಈ ನದಿವಾಯವ್ಯ ದಿಕ್ಕಿನಿಂದ ಹರಿದು ಬರುವ ಹಲವಾರು ನದಿಗಳಿಂದ ಕತ್ತರಿಸಲ್ಪಟ್ಟ ಅನೇಕ ಎತ್ತರದ ಪ್ರಸ್ಥಭೂಮಿಗಳಿಂದ ಕೂಡಿದೆ. ಉಲ್ ನದಿ ಜಿಲ್ಲೆಯ ಮಧ್ಯಭಾಗದಲ್ಲಿ ಹರಿಯುತ್ತದೆ. ಇಲ್ಲಿ ಅನೇಕ ದೊಡ್ಡ ಸರೋವರಗಳುಂಟು. ಕೆಲವು ಸರೋವರಗಳು ಉತ್ತರದ ಪ್ರಾಚೀನ ನದಿಗಳಿಂದ ಸಂಭವಿಸಿದಂಥವು. ನದಿ, ಹಳ್ಳಗಳು ಮಳೆಗಾಲದಲ್ಲಿ ಮೇರೆ ಮೀರಿ ಹರಿಯುತ್ತವೆ. ಗೋಗ್ರಾ ಮತ್ತು ಚೌಕ ನದಿಗಳು ತಮ್ಮ ಪಾತ್ರಗಳನ್ನು ಆಗಾಗ್ಗೆ ಬದಲಾಯಿಸುತ್ತಿರುತ್ತವೆ. ಈ ಕಾರಣದಿಂದಾಗಿ ಇಲ್ಲಿ ರಸ್ತೆಗಳ ನಿರ್ಮಾಣ ತುಂಬ ಕಷ್ಟ. ಪೂರ್ವದ ಎಲ್ಲೆಯ ದಟ್ಟವಾದ ಕಾಡುಗಳುಂಟು. ಅಲ್ಲಿ ಸಾಲವೃಕ್ಷಗಳು ಸಾಮಾನ್ಯ. ಪೂರ್ವದ ಎಲ್ಲೆಯ ಕಡೆಗೆ ಸಸ್ಯಗಳು ಹೆಚ್ಚು ಒತ್ತಾಗಿವೆ. ಅಲ್ಲಿ ನಿಂತ ನೀರಿನಿಂದಾಗಿ ವಾಯುಗುಣ ಅನಾರೋಗ್ಯಕರ. ಉತ್ತರದ ಕಾಡಿನ ಬಹುಭಾಗ ಸರ್ಕಾರಕ್ಕೆ ಸೇರಿದ್ದು. ನದಿಗಳು ಮೆಕ್ಕಲುಮಣ್ಣನ್ನು ತಂದು ಬಿಡುವುದರಿಂದ ನದೀ ದಂಡೆಗಳು ತುಂಬ ಫಲವತ್ತಾಗಿವೆ. ಬತ್ತ ಇಲ್ಲಿಯ ಮುಖ್ಯ ಬೆಳೆ. ಲಕ್ಷ್ಮೀಪೂರ, ಮಹಮದೀ ಮತ್ತು ಗೋಳಾ ದೊಡ್ಡ ವ್ಯಾಪಾರಸ್ಥಳಗಳು. ಗೋಳಾದಲ್ಲಿ ಒಂದು ಪ್ರಾಚೀನ ದೇವಾಲಯವುಂಟು. ಸಕ್ಕರೆ ಈ ಜಿಲ್ಲೆಯ ಮುಖ್ಯ ಕೈಗಾರಿಕೆ. ವ್ಯವಸಾಯ ಮತ್ತು ಪಶು ಪೋಷಣೆ ಇಲ್ಲಿಯ ಮುಖ್ಯ ಕಸುಬು. ಇತ್ತೀಚೆಗೆ ಕಾಡನ್ನು ಕಡಿದು ವ್ಯವಸಾಯ ಕ್ಷೇತ್ರಗಳು ಹೆಚ್ಚಿಸಿಕೊಂಡಿದ್ದಾರೆ. ನೇಪಾಳದೊಂದಿಗೆ ಈ ಜಿಲ್ಲೆ ವ್ಯಾಪಾರಸಂಪರ್ಕ ಹೊಂದಿದೆ.

	ಹಿಂದಿನ ಕಾಲದಲ್ಲಿ ಹಸ್ತಿನಾಪುರ ರಾಜರ ವಶದಲ್ಲಿ ಈ ಪ್ರದೇಶವಿತ್ತೆಂದು ಹೇಳಲಾಗಿವೆ. 10ನೆಯ ಶತಮಾನದ ಅನಂತರ ಇದು ರಜಪೂತರ ಆಡಳಿತಕ್ಕೆ ಒಳಪಟ್ಟಿತು. ಅಕ್ಬರನ ಕಾಲದಲ್ಲಿ ಇದನ್ನು ಖೈರಾಬಾದ್ ಪರಗಣದಲ್ಲಿ ವಿಲೀನಗೊಳಿಸಲಾಯಿತು. 1801ರಲ್ಲಿ ಇದು ರೋಹಿಲಖಂಡದೊಂದಿಗೆ ಬ್ರಿಟಿಷರ ಅಧೀನಕ್ಕೆ ಬಂತು. ಮುಂದೆ ಅಯೋಧ್ಯೆಯ ನವಾಬರ ಆಳ್ವಿಕೆಗೆ ಒಳಪಟ್ಟಿದ್ದು ಕೊನೆಗೆ ಅದರೊಂದಿಗೆ ಬ್ರಿಟಿಷರ ನೇರ ಆಡಳಿತಕ್ಕೆ ಸೇರಿತು. ಪ್ರಾಚೀನ ಕಾಲದ ಅನೇಕ ಅವಶೇಷಗಳೂ ಶಾಸನಗಳೂ ಇಲ್ಲಿವೆ. ನೇಪಾಳದ ಕಡೆಯ ದಾಳಿಗಳನ್ನು ತಡೆಯುವ ಉದ್ದೇಶದಿಂದ ಕಟ್ಟಲಾದ ಕೋಟೆಗಳ ಸಾಲೇ ಇದೆ. ಖೇರೀ ಜಿಲ್ಲೆಯ ಜನಸಂಖ್ಯೆ 14,79,432 (1971), ಜಿಲ್ಲೆಯ ಜನರ ಪ್ರಮುಖ ಭಾಷೆ ಹಿಂದಿ. ಲಖಿಂಪುರ ಇದರ ಆಡಳಿತ ಕೇಂದ್ರ. ಜನ ಸಂಖ್ಯೆ 43,793 (1971).

	ಖೇರೀ ಪಟ್ಟಣ ಲಖನೌ ನಗರದ ಉತ್ತರಕ್ಕೆ 73 ಮೈ. ದೂರದಲ್ಲಿ ಈಶಾನ್ಯ ರೈಲ್ವೆ ಮಾರ್ಗದಲ್ಲಿದೆ. ಸಕ್ಕರೆ ಕೈಗಾರಿಕೆಯ ಕೇಂದ್ರ. ಜನಸಂಖ್ಯೆ 12,008 (1971). 				   			 (ಎಸ್.ಎನ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ